ಲವ್ ಯೂ ರಚ್ಚು ಸಿನಿಮಾ ಮಂದಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಬೊಮ್ಮಾಯಿ..!
‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಸ್ಪರ್ಶಿಸಿ ಸಾಹಸ ಕಲಾವಿದ ವಿವೇಕ್ ಸಾವು ಪ್ರಕರಣ ಸಂಬಂಧ ಸಿನಿಮಾ ಮಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಸಿನಿಮಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಹೊಸ ಆದೇಶ ಜಾರಿ ಮಾಡಲಿದೆ ಅಂತಾ ಹೇಳಿದ್ದಾರೆ.
ಸಾಹಸ ಕಲಾವಿದ ವಿವೇಕ್ ಸಾವು ಬೇಸರ ತರಿಸಿದೆ. ಈ ರೀತಿ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶೂಟಿಂಗ್ ವೇಳೆ ಕೆಲವರು ನಿಯಮಗಳನ್ನು ಸರಿಯಾಗಿ ಪಾಲುಸುತ್ತಿಲ್ಲ. ಚಿತ್ರೀಕರಣಕ್ಕೆ ಅನುಮತಿ ಪಡೆಯುವ ನಿಯಮಗಳಲ್ಲಿ ನಾವು ಬದಲಾವಣೆ ತರುತ್ತೇವೆ. ಇನ್ನುಮುಂದೆ ಅನುಮತಿ ಇಲ್ಲದೆ ಯಾವುದೇ ರೀತಿ ಚಿತ್ರೀಕರಣ ಮಾಡುವಂತಿಲ್ಲ. ಶೂಟಿಂಗ್ ಸಂಬಂಧಿಸಿದಂತೆ ನಾಳೆ, ನಾಡಿದ್ದು ಹೊಸ ಆದೇಶ ಮಾಡುತ್ತೇವೆ ಅಂತಾ ಹೇಳಿದ್ದಾರೆ.
ಸಹಾಯಕ ಫೈಟರ್ ವಿವೇಕ್ ಸಾವು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ‘ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸುತ್ತೇನೆ. ಅಮಾಯಕರು ಮೃತಪಟ್ಟಾಗ ಮನಸ್ಸಿಗೆ ಬೇಸರವಾಗುತ್ತದೆ. ಚಿತ್ರಗಳನ್ನಷ್ಟೇ ನಾವು ವೀಕ್ಷಿಸುತ್ತೇವೆ, ಆದರೆ ತೆರೆ ಹಿಂದೆ ಏನೇನು ನಡೆಯುತ್ತದೆ ಎಂದು ಗೊತ್ತಾಗುವುದಿಲ್ಲ. ಈ ರೀತಿಯ ಘಟನೆಗಳು ನಡೆದಾಗ ಎಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಶೂಟಿಂಗ್ ನಡೆಸುತ್ತಾರೆ ಅನ್ನೋದು ತಿಳಿಯುತ್ತದೆ. ಹೀಗಾಗಿ ಸಿನಿಮಾ ಜಗತ್ತು ಸರಿಯಾದ ರೀತಿ ಅದನ್ನು ನಿರ್ವಹಿಸಬೇಕು’ ಅಂತಾ ಹೇಳಿದ್ದಾರೆ.
‘ಅಮಾಯಕರು, ಪ್ರತಿಭಾವಂತ ಕಲಾವಿದರು ಈ ರೀತಿ ದುರಂತ ಅಂತ್ಯ ಕಾಣಬಾರದು. ಕಾನೂನಿನಡಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಖಳನಟರಾದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದರು. ಪದೇ ಪದೇ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಶೂಟಿಂಗ್ ಮಾಡುವ ವೇಳೆ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾಕಷ್ಟು ಎಚ್ಚರಿಕೆ ವಹಿಸುವು ತುಂಬಾ ಮುಖ್ಯ’ ಅಂತಾ ಹೇಳಿದ್ದಾರೆ.