ನಂಬಿದ್ರೆ ನಂಬಿ, ಬಿಟ್ರೆ ಬಿಡಿ..! ಮೆಸ್ಸಿ ಕಣ್ಣೀರೊರೆಸಿದ ಟಿಶ್ಯು ಪೇಪರ್ ಬೆಲೆ 7 ಕೋಟಿ 43.77 ಲಕ್ಷ..!
ಈಗ ನಾವು ಹೇಳ್ತಿರೋದು ನಿಜ.! ಅರ್ಜೆಂಟೀನಾ ಪುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಕಣ್ಣೀರು ಒರೆಸಿದ ಟಿಶ್ಯೂ ಪೇಪರ್, 1 ಮಿಲಿಯಲ್ ಯು.ಎಸ್ ಡಾಲರ್ಗೆ ಹರಾಜಿಗಿಡಲಾಗಿದೆ. ಇದು ಅಚ್ಚರಿ ಎನಿಸಿದರೂ ಸತ್ಯ. ಬಾರ್ಸಿಲೋನಾ ತಂಡ ತೊರೆಯುವಾಗ ತೀರಾ ಭಾವುಕಕ್ಕೆ ಒಳಗಾಗಿದ್ದ ಲಿಯೊನೆಲ್ ಮೆಸ್ಸಿ, ತಮ್ಮ ವೃತ್ತಿಜೀವನದ 21 ವರ್ಷಗಳ ಸುದೀರ್ಘ ಪ್ರಯಾಣಕ್ಕೆ ಅಂತಿಮ ವಿದಾಯ ಘೋಷಿಸಿದ್ರು.
ಮಾಧ್ಯಮಗೋಷ್ಠಿ ನಡೆಸಿದ ಸಂದರ್ಭದಲ್ಲಿ ತನ್ನ ಸುದೀರ್ಘ ಪ್ರಯಾಣದ ಕುರಿತು ಮಾತನಾಡಿದ ಮೆಸ್ಸಿ, ಬಾರ್ಸಿಲೋನಾ ತಂಡದೊಂದಿಗಿನ ಮಧುರ ನೆನಪುಗಳನ್ನು ಬಿಚ್ಚಿಟ್ಟಿದ್ದರು. ಆದರೆ ತನ್ನ ನೆನಪುಗಳನ್ನು ನೆನೆದು ಮೆಸ್ಸಿ, ಕಣ್ಣೀರು ಹಾಕಿದ್ರು.
ಅಂದು ಮೆಸ್ಸಿ ಕಣ್ಣೀರು ಹಾಕಿದ ಸುದ್ದಿ, ವಿಶ್ವದಗಲ ವರದಿಯಾಗಿತ್ತು. ಆದರೀಗ ತನ್ನ ಕಣ್ಣಿರು ಒರೆಸಿಕೊಳ್ಳಲು ಬಳಸಿದ್ದ ಟಿಶ್ಯೂ ಪೇಪರ್ ಹರಾಜಿಗಿರುವುದು, ಮೆಸ್ಸಿ ಕಣ್ಣೀರು ಹಾಕಿದ್ದಕ್ಕಿಂತ ಹೆಚ್ಚು ಸುದ್ದಿಯಲ್ಲಿದೆ.
ಹೌದು.. ಸುದ್ದಿಗೋಷ್ಠಿಯಲ್ಲಿ ಮಾತನಾಡೋವಾಗ ಭಾವುಕಕ್ಕೆ ಒಳಗಾಗಿ ಮೆಸ್ಸಿ ತನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಗ ಪತ್ನಿ ಆಂಟೊನೆಲ್ಲಾ ಕಣ್ಣೀರನ್ನು ಒರೆಸಿಕೊಳ್ಳಲು ಮೆಸ್ಸಿಗೆ ಟಿಶ್ಯೂ ಪೇಪರ್ ನೀಡಿದ್ರು. ಕಣ್ಣೀರು ಒರೆಸಿದ ಟಿಶ್ಯೂವನ್ನು ಯಾರು ತಾನೇ ತೆಗೆದುಕೊಳ್ಳುತ್ತಾರೆ ನೀವೇ ಹೇಳಿ.? ಆದರೆ ಸುದ್ದಿಗೋಷ್ಠಿ ವೇಳೆ ಮುಂಭಾಗದಲ್ಲೇ ಕುಳಿತಿದ್ದ ವ್ಯಕ್ತಯೋರ್ವ, ಅದನ್ನ ತೆಗೆದುಕೊಂಡಿದ್ದಲ್ಲದೆ ಮಾರಾಟಕ್ಕಿಟ್ಟು ಅಚ್ಚರಿ ಮೂಡಿಸಿದ್ದಾರೆ.
ಈ ಟಿಶ್ಯೂದಲ್ಲಿ ಕಣ್ಣೀರು ಒರೆಸಿ ಪಕ್ಕಕ್ಕಿಟ್ಟಿದ್ದನ್ನು ಎತ್ತಕೊಂಡ ಅಪರಿಚಿತನೊಬ್ಬ, ಒಂದು ಮಿಲಿಯನ್ ಯು.ಎಸ್ ಡಾಲರ್ಗೆ ಹರಾಜಿಗಿಟ್ಟಿದ್ದಾರೆ. ಆ ಟಿಶ್ಯೂವನ್ನು ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಅದಕ್ಕೆ ಒಂದು ಮಿಲಿಯನ್ ಪ್ರೈಸ್ ಟ್ಯಾಗ್ ಹಾಕಲಾಗಿದೆ.