ಗೌಡ್ರು ತೋರ್ಸೋದು ಗೌಡತ್ವ, ದಲಿತರು ತೋರಸೋದು ದಲಿತತ್ವ: ಬ್ರಾಹ್ಮಣರು ಮುಚ್ಕೊಂಡು ಕೂತಿದಾರೆ, ಅದಕ್ಕೆ ಬೇಕಾಬಿಟ್ಟಿ ಮಾತಾಡ್ತಾರೆ.
ಮಹಾತ್ಮ ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಹಾಡಿ ಹೊಗಳಿ..ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿ ಕುಂತಿದ್ದಾರೆ ಎಂದ ನಟಿ ಅನಿತಾ ಭಟ್…!!! ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯದ ಚರ್ಚೆ ಮಾಡುವುದು ಬಹಳ ಅಪರೂಪ. ಇಂಥಹವರ ಸಂಖ್ಯೆ ಬೆರಳೆಣಿಕೆ. ಅದರಲ್ಲೂ ಜಾತಿಯಂಥಹಾ ಸೂಕ್ಷ್ಮ ವಿಚಾರಗಳಿಂದ ದೂರವೇ ಇರುತ್ತಾರೆ. ಇದು ಅವರವರ ಆಯ್ಕೆ ಸಹ.
ಆದರೆ ಕನ್ನಡದ ನಟಿ ಅನಿತಾ ಭಟ್ ಇಂದು ಟ್ವಿಟ್ಟರ್‌ನಲ್ಲಿ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಅಭಿಪ್ರಾಯಗಳಿಗೆ ವಿರುದ್ಧ ಅಭಿಪ್ರಾಯ ವ್ಯಕ್ತ ಪಡಿಸಿ ಕಮೆಂಟ್ ಮಾಡಿದವರಿಗೆ ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಗೋಡ್ಸೆ ಹೊಗಳಿಕೆಯಿಂದ ಆರಂಭಿಸಿ ಬ್ರಾಹ್ಮಣ, ಬ್ರಾಹ್ಮಣ್ಯ ಇತರೆ ವಿಷಯಗಳ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ ಅನಿತಾ ಭಟ್. ”ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಅಂತ ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ” ಎಂದಿದ್ದಾರೆ ನಟಿ.
”ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಯವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರಿಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿನಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು” ಎಂದಿರುವ ಅನಿತಾ ಭಟ್, ನಾಥೋರಾಮ್ ಗೋಡ್ಸೆ ರಚಿತ ‘ವೈ ಐ ಅಸಾಸಿನೇಟೆಡ್ ಗಾಂಧಿ’ ಹೆಸರಿನ ಪುಸ್ತಕವನ್ನು ಓದುವಂತೆ ಮತ್ತೊಂದು ಟ್ವೀಟ್‌ನಲ್ಲಿ ಸಲಹೆ ಕೊಟ್ಟಿದ್ದಾರೆ.
”ಬ್ರಾಹ್ಮಣರು ತೋರಿಸೋದು ಬ್ರಾಹ್ಮಣ್ಯ , ಗೌಡ್ರು ತೋರ್ಸೋದು ಗೌಡತ್ವ, ದಲಿತರು ತೋರಸೋದು ದಲಿತತ್ವ , ಲಿಂಗಾಯತರು ತೋರ್ಸೋದು ಲಿಂಗಾಯತತ್ವ .. ಎಲ್ಲ ಜಾತಿಯವರೂ ಮೇಲು ಕೀಳು ಅನ್ನೋ ಅಸಮಾನತೆ ತೋರಿಸುವಾಗ ಬ್ರಾಹ್ಮಣ್ಯ ಅನ್ನೋ ಹಣೆಪಟ್ಟಿ ಯಾಕೆ ? ದಲಿತರಲ್ಲೂ ಒಳ ಜಾತಿ ಇದೆ ಅಂತ ಕೇಳಿಪಟ್ಟೆ. ಓದಿದಿನಿ ಕೂಡ. ಅದನ್ನ ಯಾವಾಗ ತೊಲಗಿಸೋದು” ಎಂದು ಇನ್ನೊಂದು ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ ಅನಿತಾ ಭಟ್. ”ನನ್ನ ಅಮ್ಮ ಎಷ್ಟೋ ವರ್ಷಗಳಿಂದ ಜಾತಿ ಪದ್ಧತಿಯನ್ನು ದೂರ ಇಟ್ಟಿದ್ದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೆ ದೇವರಿಗೆ ಪೂಜೆ ಸಹ ಮಾಡಿದ್ದಾಳೆ ಆ ಹುಡುಗಿ. ನನಗೆ ಇದರಲ್ಲಿ ವಿಶೇಷತೆ ಏನೂ ಕಂಡಿಲ್ಲ” ಎಂದು ಮತ್ತೊಂದು ಟ್ವೀಟ್‌ನಲ್ಲಿ ತಾವು ಜಾತೀವಾದಿಯಲ್ಲ ಎಂದುದಕ್ಕೆ ಸಾಕ್ಷ್ಯ ನೀಡಿದ್ದಾರೆ ನಟಿ.