ಹಿಂದೂ ಯುವತಿಯ ಮದುವೆ ಮಾಡಿದ ಉಳ್ಳಾಲದ ಮುಸ್ಲಿಂ ಕುಟುಂಬ
ಮಂಗಳೂರು ಅತ್ಯಂತ ಕೋಮುಸೂಕ್ಷ್ಮ ಪ್ರದೇಶ. ಇಲ್ಲಿ ಕೋಮುಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನಗಳು ನಿರಂತರ ನಡೆಯುತ್ತಿರುತ್ತವೆ. ಇವೆಲ್ಲದರ ನಡುವೆಯೂ ಕೋಮು ಸೌಹಾರ್ದತೆ ಸಾರುವ ಪ್ರಕರಣಗಳೂ ನಡೆಯುತ್ತಿರುತ್ತವೆ. ಅಂತಹುದೇ ಒಂದು ಸಂತಸದ ವಿಚಾರ ಕೋಮುಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಉಳ್ಳಾಲದಲ್ಲಿ ನಡೆದಿದೆ. ಹೌದು, ಉಳ್ಳಾಲದಲ್ಲೊಂದು ಸೌಹಾರ್ದ ಕಂಕಣಭಾಗ್ಯ ನಡೆದ ಅಪರೂಪದ ಘಟನೆ ನಡೆದಿದೆ. ಆರ್ಥಿಕ ಅಶಕ್ತ ಹೆಣ್ಣುಮಗಳ ಮದುವೆಯೊಂದನ್ನು ಮುಸ್ಲಿಂ ಸಹೋದರರ ಕುಟುಂಬವೊಂದು ನೆರವೇರಿಸಿ ಸೌಹಾರ್ದತೆಯನ್ನು ಸಾರಿದೆ.
ಮೂಲತಃ ಮಂಗಳೂರಿನ ಶಕ್ತಿನಗರದವರಾದ ಕವನ ಅವರ ಕುಟುಂಬ ಆರ್ಥಿಕವಾಗಿ ಅಶಕ್ತವಾದ ಕುಟುಂಬ. ವಿಧವೆ ತಾಯಿ ಗೀತಾರೊಂದಿಗೆ ಉಳ್ಳಾಲ ಮಂಚಿಲದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಅವಿವಾಹಿತೆ ಕವನಳಿಗೆ ಸಂಬಂಧ ಕೂಡಿಬಂದಿತ್ತು. ಜುಲೈ 11 ಮದುವೆಗೆ ದಿನ ನಿಗದಿಯಾಗಿತ್ತು. ಆದರೆ ಇವರಲ್ಲಿ ಆರ್ಥಿಕ ಸಂಪನ್ಮೂಲ ಏನೂ ಇಲ್ಲದ ಕಾರಣ ಅಕ್ಷರಶಃ ಮದುವೆ ನಿಲ್ಲುವ ಹಂತಕ್ಕೆ ತಲುಪಿತ್ತು. ಈ ವಿಷಯವನ್ನರಿತ ಸಂಬಂಧಿ ಸುರೇಶ್ ಎಂಬವರು ಆತ್ಮೀಯ ಗೆಳೆಯ ಎಂ.ಕೆ. ರಝಾಕ್ ಎಂಬವರೊಂದಿಗೆ ನೋವು ಹಂಚಿಕೊಂಡಿದ್ದರು. ಆನಂತರ ನಡೆದದ್ದೇ ಬೇರೆ. ಕವನಳ ಬಾಳಿಗೆ ಎಂ.ಕೆ.ಕುಟುಂಬ ಅಭಯಹಸ್ತ ನೀಡುವ ಮೂಲಕ ಮದುವೆ ಸುಸೂತ್ರವಾಗಿ ನಡೆಯಿತು.
ಪ್ರಾರಂಭದಲ್ಲಿ ಎಂ.ಕೆ. ರಝಾಕ್ ಮತ್ತು ಎಂ.ಕೆ. ರಿಯಾಝ್ ಅವರು ಕವನಾ ಅವರ ಮನೆಗೆ ಗ್ಯಾಸ್, ರೇಶನ್ ವ್ಯವಸ್ಥೆ ಮಾಡಿದ್ದರು. ನಂತರ ಮದುವೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಇವರು ಎಂ.ಕೆ. ಗ್ರೂಪಿನ ಅಧ್ಯಕ್ಷರಾದ ಯು.ಎಚ್. ಅಬ್ದುರ್ರಹ್ಮಾನ್ ಹಾಗೂ ಎಂ.ಕೆ. ಹಂಝ ಅವರ ಮುತುವರ್ಜಿಯೊಂದಿಗೆ ಎಂ.ಕೆ. ಗ್ರೂಪ್ ಮ್ಯಾರೇಜ್ ಫಂಡ್ ನಿಂದ ಬಡ ಹಿಂದೂ ಹುಡುಗಿಗೆ ಸಹಾಯಹಸ್ತ ಚಾಚುತ್ತಾರೆ. ಮದುಮಗಳಿಗೆ ಎಂ.ಕೆ.ಕುಟುಂಬವು ಬಂಗಾರದ ಕಾಲು ಮತ್ತು ಕೈ ಉಂಗುರ, ಬೆಂಡೋಲೆ ಮತ್ತಿತರ ಬೆಳ್ಳಿ ವಸ್ತುಗಳನ್ನು ನೀಡಿದ್ದಾರೆ.
ಜೊತೆಗೆ ಸ್ಥಳೀಯ ಶಾಸಕರಾದ ಯು.ಟಿ. ಖಾದರ್ ಅವರೂ ಈ ಕುಟುಂಬದ ಪರಿಸ್ಥಿತಿ ಅರಿತು ದೊಡ್ಡ ಮೊತ್ತದ ಧನಸಹಾಯ ಮಾಡಿ ಶುಭ ಹಾರೈಸಿದ್ದಾರೆ. ಇನ್ನಿತರ ದಾನಿಗಳೂ ತಮ್ಮ ಉದಾರತೆ ತೋರಿದ್ದಾರೆ.
ಶನಿವಾರ ಕವನಾ ಅವರ ಮೆಹಂದಿ ಕಾರ್ಯಕ್ರಮವು ಎಂ.ಕೆ. ಹಂಝ ಅವರ ಮನೆಯಲ್ಲಿ ಸಡಗರದಿಂದ ನಡೆಯಿತು. ವಿವಾಹವು ಭಾನುವಾರ ವರ ರಂಜಿತ್ ಜೊತೆಗೆ ತಲಪಾಡಿಯ ದೇವಿನಗರದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಟುಂಬಿಕರ ಸಮ್ಮುಖದಲ್ಲಿ ನಡೆಯಿತು. ಈ ಮೂಲಕ ಅಪರೂಪದ, ಸೌಹಾರ್ದಯುತ ಮದುವೆಗೆ ಕರಾವಳಿಯು ಸಾಕ್ಷಿಯಾಯಿತು.