ಸಿದ್ದರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕ : ಹೊಗಳಿದ ಶ್ರೀರಾಮುಲು
ಚಿತ್ರದುರ್ಗ (ಜು.14): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ. ನನ್ನ ಸ್ಪರ್ಧೆ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಪಕ್ಷ ನಿರ್ಧರಿಸಲಿದೆ. ಕಳೆದ ಸಲ ಭಗವಂತ ನೀಡಿದ ಅವಕಾಶ ಎಂದು ಭಾವಿಸಿ ಬಾದಾಮಿಯಲ್ಲಿ ಸ್ಪರ್ಧಿಸಿದ್ದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಮೊಳಕಾಲ್ಮೂರು ತಾಲೂಕಿನ ಹಿರೇಹಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಹಣೆ ಬರಹ ಏನಿದೆಯೋ ಹೆಂಗಿದೆಯೋ ಗೊತ್ತಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರೇ ಹಣೆಬರಹ ಬರೆಯುತ್ತಾರೆ ಎಂದರು.
ನೆಹರು ಕುಟುಂಬ, ದೊಡ್ಡ ವ್ಯಕ್ತಿಗಳು 2 ಕಡೆ ಸ್ಪರ್ಧಿಸುತ್ತಿದ್ದರು. ವಾಲ್ಮೀಕಿ ಸಮಾಜದ ನನಗೆ 2 ಕಡೆ ಸ್ಪರ್ಧೆಗೆ ಅವಕಾಶ ಸಿಕ್ಕಿತ್ತು. ಬಾದಾಮಿ ಜನ ಬೆಂಬಲಿಸಿದರು ಕಡಿಮೆ ಅಂತರದಲ್ಲಿ ಸೋಲಾಗಿತ್ತು ಎಂದರು.
ವಿಜಯೇಂದ್ರ ನಡುವೆ ಸಚಿವ ಶ್ರೀ ರಾಮುಲು ಅಸಮಾಧಾನ
ಸಿದ್ದರಾಮಯ್ಯ ಮತ್ತು ನಾವೆಲ್ಲಾ ಹಿಂದುಳಿದ ಸಮಾಜದಿಂದ ಬಂದವರು. ಅನೇಕ ವರ್ಷಗಳಿಂದ ಬಡವರು, ಹಿಂದುಳಿದವರ ಪರ ಹೋರಾಟದಿಂದ ಅವರು ಮೇಲೆ ಬಂದಿದ್ದಾರೆ. ಅವರು ಹಿಂದುಳಿದ ಸಮಾಜದ ದೊಡ್ಡ ನಾಯಕ. ಅಂಥವರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯ. ಅವರನ್ನು ರಾಜಕಾರಣ ಬಂದಾಗ ಮಾತ್ರ ವಿರೋಧಿಸುತ್ತೇನೆ. ಉಳಿದಂತೆ ವ್ಯಕ್ತಿತ್ವ ಮತ್ತು ಹಿಂದುಳಿದ ಸಮಾಜದ ವಿಚಾರದಲ್ಲಿ ಗೌರವಿಸುತ್ತೇನೆ ಎಂದರು.